"ನಾಗರಸ":--
ಸು. 1650 ಕರ್ಣಾಟಕ ಭಗವದ್ಗೀತೆಯ ಕರ್ತೃ. ಬ್ರಾಹ್ಮಣಕವಿ; ಕಾಶ್ಯಪ ಗೋತ್ರದವ. ವಿಶ್ವೇಶ್ವರನ ಮಗ; ಶಂಕರಗುರುವಿನ ಶಿಷ್ಯ. ಭಗವದ್ಗೀತೆಯನ್ನು ಪೂರ್ಣವಾಗಿ ಪದ್ಯರೂಪದಲ್ಲಿ ಕನ್ನಡಿಸುವ ಮೊದಲ ಪ್ರಯತ್ನ ಈತನದು. ಸಂಸ್ಕøತದ ಮಹಾಭಾರತ, ಭಾಗವತ, ರಾಮಾಯಣ, ಮುಂತಾದ ಧಾರ್ಮಿಕ ಕಾವ್ಯಗಳು ಕನ್ನಡದಲ್ಲಿ ಷಟ್ಪದೀರೂಪದಿಂದ ನಾಡಿಗೆ ಬೆಳಕನ್ನೂ ಕವಿಗಳಿಗೆ ಯಶಸ್ಸನ್ನೂ ತಂದ ಭಕ್ತಿಯುಗದಲ್ಲೇ ಈತನ `ಕರ್ಣಾಟಕ ಭಗವದ್ಗೀತೆ ರಚಿತವಾಯಿತು. ರಾಯಚೌಪಟಮಲ್ಲ, ಮುರಧ್ವಂಸಿ ಮುಂತಾದ ಕುಮಾರವ್ಯಾಸನ ಮಾತುಗಳ ಮಾರ್ದನಿ ಈತನ ಗ್ರಂಥದಲ್ಲಿ ಮೇಲಿಂದ ಮೇಲೆ ಬರುತ್ತದೆಯಾಗಿ ಈತ ಆತನಿಂದ ಪ್ರಭಾವಿತನಾಗಿರುವುದು ಸ್ಪಷ್ಟ. ಈತನ ಭಾಮಿನೀ ಷಟ್ಪದಿಯ ಓಟ ಒಮ್ಮೊಮ್ಮೆ ಕುಂಟುತ್ತದೆ; ಮಹಾಕವಿಯೆಂದು ಈತನನ್ನು ಶ್ಲಾಘಿಸುವಂತಿಲ್ಲ. ಆದರೆ ಈತನ ಉದ್ದೇಶವೇ ಅನುವಾದಕಾರ್ಯ; ಪ್ರಾಸ ಕೂಡಲಿ ಕೂಡದಿರಲಿ....ವಾಸುದೇವ ಕಥಾಮೃತವಿಶ್ವಾಸದಿಂ ನೆರೆ ತಿಳಿದು ಸುಖಿಸುವುದೇ ಉದ್ದೇಶವಾಗಿರುವ ಸಾಧಕರಿಗಾಗಿ ಗೀತೆಯ ಪ್ರತಿಪದ್ಯವನ್ನೂ ಒಂದೊಂದು ಷಟ್ಪದಿಯನ್ನಾಗಿ ಕನ್ನಡಿಸಿದ್ದಾನೆ.

ಭಾಷಾಂತರದ ದೃಷ್ಟಿಯಿಂದ ಈತನ ಭಾಷಾಂತರ ಅತ್ಯಂತ ಯಶಸ್ವಿಯಾಗಿದೆ ಎನ್ನಬೇಕು. ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ, ಮೂಲದ ಸರಳ ಸುಭಗತೆ ಕುಗ್ಗದಂತೆ, ಅಪಾರ್ಥ ನುಗ್ಗದಂತೆ ಈತ ತನ್ನ ಅನುವಾದ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದಾನೆ. ಈತನ ಪಾದಪೂರಕ ಉಕ್ತಿಗಳು ಮೂಲದ ಅರ್ಥಗ್ರಹಣೆಗೆ ಸಾಧಕವಾಗುತ್ತವೆಯೇ ವಿನಾ ಬಾಧಕವಾಗುವುದಿಲ್ಲ. ಕೃತಿ ಕನ್ನಡದ ಸ್ವತಂತ್ರ ರಚನೆ ಎನಿಸುವಷ್ಟು ಸಹಜವಾಗಿ ಹರಿಯುತ್ತದೆ. ಉದಾಹರಣೆಗಾಗಿ:

 ತಂದೆ ನೀನು ಚರಾಚರಂಗಳಿ
 ಗಿಂದು ಲೋಕಕೆ ಪೂಜ್ಯ ಗುರುವರ
 ಬಂಧು ನೀ ತ್ರೈಲೋಕ್ಯದೊಳಗಪ್ರತಿಮನಹ ನಿನಗೆ |
 ಇಂದು ಸಮನಿಲ್ಲಾಗಿನೆ¾ಃ ನಿ
 ನ್ನಿಂದಧಿಕನಿನ್ನಾವನುಂಟು ಮು
 ಕುಂದ ನಿನ್ನಿಂ ಪಿರಿದು ಮತ್ತೊಂದಿಲ್ಲ ಕೇಳೆಂದ ||

ಒಮ್ಮೊಮ್ಮೆ ಸುಂದರವಾದ ಹೊಸ ಅರ್ಥಗಳನ್ನೂ ಈತ ಸೂಚಿಸುವುದುಂಟು. `ಪುಷ್ಪಿತಾಂ ವಾಚಂ' ಎಂಬುದಕ್ಕೆ `ಕರ್ಮವೆನಿಸುವ ಬಂಜೆ ಹೂವಿನ ಧರ್ಮವಿಡಿದೀಮಾತ ಎನ್ನುತ್ತಾನೆ. ಕನ್ನಡದ ಗೀತಾಸಾಹಿತ್ಯದಲ್ಲಿ ಈತನಿಗೆ ಕಾಲದಿಂದಷ್ಟೇ ಅಲ್ಲ, ಗುಣದಿಂದಲೂ ಅಗ್ರಸ್ಥಾನವಿದೆ. 										
		(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ